ಶಶಿಕರ ಪಾತೂರು

ತರಬೇತಿ ಪಡೆದಿರುವುದು ಚಿತ್ರಕಲಾ ಶಿಕ್ಷಣದಲ್ಲಿ. ಆದರೆ ಆಸಕ್ತಿ ಇದ್ದಿದ್ದು ಮಾತ್ರ ಚಿತ್ರರಂಗದಲ್ಲಿ. ಸಿನಿಮಾದಲ್ಲಿ ನಾಯಕನಾಗುವ ಕನಸು ಇರಲಿಲ್ಲ. ಇದ್ದಿದ್ದೆಲ್ಲ ಹಂಸಲೇಖಾ ರೀತಿಯಲ್ಲಿ ಹಾಡು ಬರೆಯುವ ಮತ್ತು ಆ ಹಾಡುಗಳಿಗೆ ಕ್ರೇಜಿಸ್ಟಾರ್ ರವಿಚಂದ್ರನ್
ಅಭಿನಯಿಸಬೇಕೆನ್ನುವ ಕನಸು. ಅಂಥದೊಂದು ಆಸೆ ಇದ್ದರೂ ತಕ್ಷಣ ಅದು ವೃತ್ತಿಯಾಗಬಹುದೆನ್ನುವ ನಿರೀಕ್ಷೆ ನನಗೂ ಇರಲಿಲ್ಲ.
ಮಂಗಳೂರಿನ ಕರಾವಳಿ ಅಲೆ ಸಂಜೆ ಪತ್ರಿಕೆಯಲ್ಲಿ ವರದಿಗಾರನಾಗಿ ಕ್ರೈಂ ಸುದ್ದಿಗಳನ್ನು ಕೊಟ್ಟಿರುವುದಕ್ಕಿಂತ ಸಿನಿಮಾ ಲೇಖನಗಳನ್ನು ಬರೆದಿರುವುದೇ ಹೆಚ್ಚು. ಮುಂದೆ ವಾರ್ತಾ ಭಾರತಿ ದೈನಿಕದಲ್ಲಿಯೂ ಅದೇ ಕೆಲಸ ಮಾಡಿದೆ. ಕೊನೆಗೊಂದು ಅವಕಾಶ ಕೇಳಿ ಬೆಂಗಳೂರಿಗೆ ಬಂದವನು ಇಲ್ಲೇ ಉಳಿದುಕೊಂಡೆ. ಜನಶ್ರೀ ವಾಹಿನಿ ಆರಂಭವಾದಾಗ ಅಲ್ಲಿ ಕೆಲಸಕ್ಕೆಂದು ಸೇರಿಕೊಂಡ ನನಗೆ ನೀಡಿದ ಜನರಲ್ ಸೆಕ್ಷನ್ ಇಷ್ಟವಾಗಲಿಲ್ಲ ಎನ್ನುವ ಒಂದೇ ಕಾರಣದಿಂದ ತೊರೆದು ಟಿ.ಎಸ್ ನಾಗಾರಭರಣ ಕೆಳದಿ ಚೆನ್ನಮ್ಮ ಧಾರಾವಾಹಿಯ ಸೆಟ್ ಸೇರಿಕೊಂಡಿದ್ದೆ. ಗುರುದಾಸ್ ಶೆಣೈ ಅವರ ನಿರ್ದೇಶನದ ರಿಯಾಲಿಟಿ ಶೋನಲ್ಲಿ ಸಹಾಯಕ ನಿರ್ದೇಶಕನಾಗುವುದರ ಜತೆಗೆ ಪತ್ರಿಕೆಗಳಿಗೆ ಬರೆಯುವುದನ್ನು ಮುಂದುವರಿಸಿದ್ದೆ. ಟೀವಿ ಲೋಕ, ಟೈಮ್ಸ್ ಆಫ್ ಕರ್ನಾಟಕ, ಕನ್ನಡ ಪ್ರಭ ಮೊದಲಾದ ಪತ್ರಿಕೆಗಳಲ್ಲಿ ಫ್ರೀಲೇನ್ಸ್ ಬರಹಗಳನ್ನು ಬರೆದ ಬಳಿಕ ಸೇರಿಕೊಂಡಿದ್ದು ವಿಶ್ವವಾಣಿ ದೈನಿಕಕ್ಕೆ. ಅಲ್ಲಿಂದ ಸುದ್ದಿ ಟಿವಿಯ ಸಿನಿಮಾ ವಿಭಾಗದಲ್ಲಿ ಸಿನಿಮಾ ಪ್ರೋಗ್ರಾಮ್ ಗಳನ್ನು ಮಾಡುವ ಅವಕಾಶ ದೊರೆಯಿತು.
ಇದರ ನಡುವೆ ಒಂದೆರಡು ಕನ್ನಡ ಚಿತ್ರಗಳಿಗೆ ಹಾಡು ಬರೆಯುವ ಅವಕಾಶವೂ ದೊರೆಯಿತು. ಈ ಎಲ್ಲ ಅನುಭವಗಳನ್ನು ಸೇರಿಸಿಕೊಂಡು ಇದೀಗ ಪಾಸಿಟಿವ್ ಪಿಕ್ಚರ್ ಮಾಡಿದ್ದೇನೆ. ಪತ್ನಿ ಮಲ್ಲಿಕಾ ಕೂಡ ಜತೆಗೆ ಕೈ ಜೋಡಿಸಿದ್ದಾಳೆ. ಎಲ್ಲದಕ್ಕೂ ಮೊದಲು ನನ್ನ ತಾಯಿ ಜಾನಕೀ ಶ್ರೀಧರನ್ ಮತ್ತು ಕುಟುಂಬ ಹಾಗೂ ಸ್ನೇಹಿತರಾದ ನಿಮ್ಮೆಲ್ಲರ ಪ್ರೋತ್ಸಾಹವೇ ಈ ಬರವಣಿಗೆಗಳಿಗೆ ಕಾರಣ. ಇನ್ನಷ್ಟು ಬರೆಯಲು ಮುಂದೆಯೂ ನಿಮ್ಮ ಪ್ರೋತ್ಸಾಹ ಅಗತ್ಯ. ವಂದನೆಗಳು.