ಸಾಹಸಿಗ ನಾರಾಯಣನ ಸಹವಾಸ ವೈಭವ..!
ಚಿತ್ರ: ಅವನೇ ಶ್ರೀಮನ್ನಾರಾಯಣ
ನಿರ್ದೇಶನ: ಸಚಿನ್ ರವಿ
ನಿರ್ಮಾಣ: ಪುಷ್ಕರ್ ಮಲ್ಲಿಕಾರ್ಜುನಯ್ಯ, ಎಚ್ ಕೆ ಪ್ರಕಾಶ್
ತಾರಾಗಣ: ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ
ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಸಚಿನ್ ತಂಡದ ಬಹು ನಿರೀಕ್ಷೆಯ ಚಿತ್ರ, ಅವನೇ ಶ್ರೀಮನ್ನಾರಾಯಣ ತೆರೆಗೆ ಬಂದಿದೆ. ಚಿತ್ರದ ಪ್ರಮುಖ ಆಕರ್ಷಣೆ ಮೇಕಿಂಗ್, ಮೇಕಿಂಗ್ ಮತ್ತು ಮೇಕಿಂಗ್. ಉಳಿದಂತೆ ರಕ್ಷಿತ್ ಮತ್ತು ಇತರ ಪಾತ್ರಗಳ ಅಭಿನಯವೇ ಕಿಂಗ್.
ಟ್ರೇಲರ್ ನಲ್ಲಿ ಸೂಚಿಸಿರುವ ಹಾಗೆ ಇದು ಒಂದು ಕಾಲ್ಪನಿಕ ಊರಿನಲ್ಲಿ ನಡೆಯುವ ಕತೆ. ಬಹುಶಃ ಅದು ಎಂಬತ್ತರ ದಶಕ ಇರಬಹುದು. ಅಮರಾವತಿ ಎನ್ನುವ ಊರು. ಆ ಪ್ರದೇಶ ಅಭೀರ ಎನ್ನುವ ಡಕಾಯಿತರ ವಂಶದ ಸುಪರ್ದಿಯಲ್ಲಿರುತ್ತದೆ. ರಾಜ ರಾಮರಾಮನಿಗೆ ಇಬ್ಬರು ಮಕ್ಕಳು. ಅವರ ಹೆಸರು ಜಯರಾಮ ಮತ್ತು ತುಕಾರಾಮ. ಅವರಿಬ್ಬರೂ ರಾಜನಾಗುವ ಕನಸು ಕಂಡವರು. ಅವರಿಬ್ಬರೂ ಕೊಳ್ಳೆ ಹೋಗಿರುವ ಸಂಪತ್ತಿನ ಹುಡುಕಾಟದಲ್ಲಿ 15 ವರ್ಷಗಳನ್ನು ಕಳೆಯುತ್ತಾರೆ. ಆಗ ಅಮರಾವತಿಯ ಪೊಲೀಸ್ ಸ್ಟೇಷನ್ ಗೆ ಪೊಲೀಸ್ ಅಧಿಕಾರಿ ಒಬ್ಬನ ಆಗಮನವಾಗುತ್ತದೆ. ಅವನೇ ಶ್ರೀಮನ್ನಾರಾಯಣ. ಆತ ಇಬ್ಬರು ಅಣ್ಣತಮ್ಮಂದಿರಲ್ಲಿ ಯಾರ ಪರವಾಗಿ ನಿಲ್ಲುತ್ತಾನೆ? ಕೊಳ್ಳೆ ಹೋಗಿರುವ ಹಣವನ್ನು ಹೇಗೆ ಪತ್ತೆ ಮಾಡುತ್ತಾನೆ? ಆ ಊರಿನ ಪತ್ರಕರ್ತೆ ಲಕ್ಷ್ಮಿಗೂ ಆ ಕಳ್ಳತನಕ್ಕೂ ಏನು ಸಂಬಂಧ? ಮೊದಲಾದ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿ ಉತ್ತರ ಸಿಗುತ್ತದೆ.

ಏನೇನಿದೆ ಆಕರ್ಷಣೆ?
ಟ್ರೇಲರ್ ನಲ್ಲಿ ತೋರಿಸಲಾಗಿರುವ ರಕ್ಷಿತ್ ಶೆಟ್ಟಿಯ ಎಂಟ್ರಿ ದೃಶ್ಯ ಮತ್ತು ಈಗಾಗಲೇ ಜನಪ್ರಿಯಗೊಂಡಿರುವ `ಹ್ಯಾಂಡ್ಸ್ ಅಪ್’ ಹಾಡು ಚಿತ್ರದ ಆರಂಭದಲ್ಲೇ ಇದೆ. ಕತೆ ಕೂಡ ನಿರೀಕ್ಷೆ ಮೀರಿದ ತಿರುವುಗಳನ್ನು ಹೊಂದಿಲ್ಲ. ಹಾಗಾಗಿ ರಕ್ಷಿತ್ ಮತ್ತು ತಂಡದ ಅಭಿನಯವನ್ನು ಕೇಂದ್ರೀಕರಿಸಿಕೊಂಡೇ ಚಿತ್ರದ ಉಳಿದ ಭಾಗ ಮುನ್ನುಗ್ಗುತ್ತದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಬಳಿಕ ಅಥವಾ ಅಷ್ಟೇ ತೂಕದ ಪಾತ್ರವಾಗಿ ಬಾಲಾಜಿ ಮನೋಹರ್ ಗಮನ ಸೆಳೆಯುತ್ತಾರೆ. ಜಯರಾಮನ ಪಾತ್ರಕ್ಕೆ ಅವರು ಜೀವ ತುಂಬಿರುವ ರೀತಿ ವಿಭಿನ್ನ. ಜಯರಾಮನ ಸಹೋದರ ತುಕಾರಾಮನಾಗಿ ಪ್ರಮೋದ್ ಶೆಟ್ಟಿ ವಿವಿಧ ಭಾವಗಳನ್ನು ತೋರಿಸುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅವರು ಎಂದಿನಂತೆ ಲವಲವಿಕೆ ತುಂಬಿದ್ದಾರೆ. ಬ್ಯಾಂಡ್ ಮಾಸ್ಟರ್ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರು ನೀಡಿರುವ ಅಭಿನಯ ಗಮನ ಸೆಳೆಯುವಂತಿದೆ. ವಿಶೇಷ ಪಾತ್ರದಲ್ಲಿ ಬಂದು ಭವಿಷ್ಯ ನುಡಿಯುವ ಗುಪ್ತಾನಂದ ಸ್ವಾಮಿಯಾಗಿ ಯೋಗರಾಜ್ ಭಟ್, ಕೌಬಾಯ್ ಕೃಷ್ಣನಾಗಿ ರಿಷಭ್ ಶೆಟ್ಟಿ, ಪೆಂಡುಲಮ್ ಮೂಲಕ ನಿಧಿ ಪತ್ತೆ ಮಾಡುವ ರಘು ರಾಮನಕೊಪ್ಪ, ಆಸೆ, ದುರಾಸೆ, ಭಯಗಳನ್ನು ಗಡ್ಡದೊಳಗೇ ಅಡಗಿಸಿ ಅಭಿನಯಿಸಿರುವ ಎಂ.ಕೆ ಮಠ, ನಾಯಕಿಯ ಬಯಸುವವನಾಗಿ ವಿಜಯ್ ಚೆಂಡೂರ್ ಮೊದಲಾದವರು ನೆನಪಲ್ಲಿ ಉಳಿಯುತ್ತಾರೆ. ಮಧುಸೂದನ್ ರಾವ್, ಅಶ್ವಿನ್ ಹಾಸನ್, ಚಂದನ್ ಆಚಾರ್, ರಘು ಪಾಂಡೇಶ್ವರ ಮೊದಲಾದ ಕಲಾವಿದರ ದಂಡೇ ಚಿತ್ರದಲ್ಲಿದೆ. ನಾಯಕಿಯಾಗಿ `ಹಾಯ್ ಅಮರಾವತಿ’ಯ ಪತ್ರಕರ್ತೆ ಲಕ್ಷ್ಮಿಯ ಪಾತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಸಿಂಪಲ್ ಹುಡುಗಿಯಂತೆ ಕಾಣಿಸಿದ್ದಾರೆ. ನಾಯಕನಾಗಿ ರಕ್ಷಿತ್ ಅವರು ಹೊಡೆದಾಟದ ದೃಶ್ಯಗಳಲ್ಲಿ ತುಂಬ ಚೆನ್ನಾಗಿ ಸ್ಕೋರ್ ಮಾಡಿದ್ದಾರೆ. ಕುತೂಹಲಕರ ದೃಶ್ಯ ಮತ್ತು ಆಕರ್ಷಕ ಸಂಭಾಷಣೆಗಳಿರದೇ ಹೋದರೆ ಮೂರು ಗಂಟೆ ಕಾಲಾವಧಿಯ ಚಿತ್ರವನ್ನು ಸಹಿಸುವುದು ಕಷ್ಟವೇ. ಅವರ ಚಿತ್ರಗಳಲ್ಲಿ ನಿರೀಕ್ಷಿಸುವ ಸಂಭಾಷಣೆಯ ವಿಚಾರಕ್ಕೆ ಬಂದರೆ ತುಸು ನಿರಾಸೆ ಸಹಜ.
ಕೆ.ಜಿ.ಎಫ್ ಜತೆಗಿನ ಹೋಲಿಕೆ ಯಾಕೆ?
ಪಂಚಭಾಷೆಗಳಲ್ಲಿ ಬಿಡುಗಡೆ ಕಂಡು ಅದ್ಭುತ ಯಶಸ್ಸು ಸಾಧಿಸಿದ ಪ್ರಥಮ ಕನ್ನಡ ಚಿತ್ರವಾಗಿ ಗುರುತಿಸಿಕೊಂಡಿರುವುದು ಕೆಜಿಎಫ್. ಆದರೆ ಅದೇ ರೀತಿಯ ಮತ್ತೊಂದು ದೊಡ್ಡ ಪ್ರಯತ್ನವಾಗಿ ಹೆಸರು ಮಾಡಿರುವಂಥ ಚಿತ್ರ ಅವನೇ ಶ್ರೀಮನ್ನಾರಾಯಣ. ಬಿಡುಗಡೆಯ ತನಕ ಹೋಲಿಕೆ ಅಷ್ಟಕ್ಕೇ ಸೀಮಿತವಾಗಿತ್ತು. ಆದರೆ ಈಗ ಸಾಮ್ಯತೆಗಳ ಪಟ್ಟಿ ಬೆಳೆದಿದೆ. ಎರಡು ಚಿತ್ರಗಳು ಕೂಡ ಸರಿಸುಮಾರು ಆಸುಪಾಸು ಎಂಬತ್ತರ ದಶಕದ ನಾಯಕನ ಕತೆಯನ್ನು ಹೇಳುತ್ತವೆ. ಕೆಜಿಎಫ್ ನಲ್ಲಿ `ಅಧೀರ’ ಎಂಬ ಚಿಕ್ಕಪ್ಪ ಮತ್ತು ಗರುಡ ಎನ್ನುವ ಮಗನ ನಡುವೆ ಸಂಪತ್ತಿನ ವಾರಸುದಾರಿಕೆಗೆ ಹೋರಾಟ ನಡೆದರೆ, ಇಲ್ಲಿ `ಅಭೀರ’ ಎನ್ನುವ ವಂಶದಲ್ಲಿ ಅಣ್ಣತಮ್ಮಂದಿರು ವಾರಸುದಾರಿಕೆಗೆ ಹೋರಾಡುತ್ತಾರೆ. ಅಲ್ಲಿನಂತೆ ಇಲ್ಲಿಯೂ ಅಸ್ವಸ್ಥ ತಂದೆಯ ಸಾವಿಗೆ ಪುತ್ರನೇ ಕಾರಣವಾಗುತ್ತಾನೆ. ಅಲ್ಲಿ ಚಿನ್ನದ ಗಣಿಯ ಕತೆ ಇದ್ದರೆ ಇಲ್ಲಿ ಚಿನ್ನದ ನಿಧಿ ಪತ್ತೆ ಮಾಡುವ ಕತೆಯಿದೆ! ಅಲ್ಲಿ ಚಿತ್ರದ ನಾಯಕ ಗಡ್ಡ ಬಿಟ್ಟ ಡಾನ್ ಆಗಿದ್ದರೆ ಇಲ್ಲಿನ ನಾಯಕ ಗಡ್ಡಧಾರಿ ಪೊಲೀಸ್ ಆಗಿದ್ದಾನೆ. ಆದರೆ ಇಷ್ಟು ಹೋಲಿಕೆಗಳನ್ನು ಇರಿಸಿಕೊಂಡ ತಕ್ಷಣ ಇದನ್ನು ಕೆಜಿಎಫ್ ಹಾಗೆ ಇದೆ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಒಟ್ಟು ಚಿತ್ರದ ಟ್ರೀಟ್ಮೆಂಟೇ ಬೇರೆ. ಆಗಲೇ ಹೇಳಿದಂತೆ ಅದು ಇತಿಹಾಸಕ್ಕೆ ಸಂಬಂಧಿಸಿದಂತೆ ಇದ್ದರೆ ಇಲ್ಲಿ ಪೂರ್ತಿ ಫ್ಯಾಂಟಸಿ ಲೋಕ ಇದೆ.
ಅವನೇ ಶ್ರೀಮನ್ನಾರಾಯಣ ಚಿತ್ರ ಯಾಕೆ ನೋಡಬೇಕು?
ಕನ್ನಡದಲ್ಲಿ ಫ್ಯಾಂಟಸಿಯೇ ತುಂಬಿದ ಚಿತ್ರವೊಂದನ್ನು ಈ ಮಟ್ಟದಲ್ಲಿ ತೆಗೆದಿರುವುದು ಪ್ರಥಮ. ಚಿತ್ರದ ಗುಣಮಟ್ಟ, ಕಲೆ ಮತ್ತು ಗ್ರಾಫಿಕ್ಸ್ ಮಿಳಿತವಾದ ತಾಂತ್ರಿಕ ವೈಭವ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ, ಕರಂ ಛಾವ್ಲಾ ಛಾಯಾಗ್ರಹಣ ವೈಭವ, ಹ್ಯಾಂಡ್ಸಪ್ ಹಾಡು, ಸಾಹಸ ಸನ್ನಿವೇಶಗಳು, ರಕ್ಷಿತ್ ಸೇರಿದಂತೆ ಪ್ರಮುಖ ಕಲಾವಿದರ ಅಭಿನಯ ಇವೆಲ್ಲವನ್ನು ಆಸ್ವಾದಿಸುವ ಆಸಕ್ತಿ ಇದ್ದವರು ಖಂಡಿತವಾಗಿ ಚಿತ್ರ ಥಿಯೇಟರ್ ನಲ್ಲೇ ನೋಡಬೇಕು.

