top of page

ದಾಖಲೆಗಳನ್ನೇ ಗಿರಿಗಿಟ್ಲೆ ಹೊಡೆಸಿದ `ಗಿರಿಗಿಟ್’  ಸಿನಿಮಾ

Girigit no 1.jpg

ನಿರ್ದೇಶನದ ಪ್ರಥಮ ಚಿತ್ರವೇ ಸುಪರ್ ಹಿಟ್ ಆಗುವ ಅವಕಾಶ ಸಿಗಬೇಕಾದರೆ ಅದೃಷ್ಟ ಬೇಕು. ಯಾಕೆಂದರೆ ಹೊಸ ನಿರ್ದೇಶಕರಿಗೆ ಅವಕಾಶ ನೀಡಿ ದೊಡ್ಡ ಬ್ಯಾನರ್ ಸಿನಿಮಾಗಳೇ ಅಡ್ಡಡ್ಡ ಮಲಗಿದ ಉದಾಹರಣೆಗಳಿವೆ. ಪರದೆಯ ಮೇಲೆ ಹೊಸ ಮುಖಗಳ ಎಂಟ್ರಿಯಾಗುವಾಗಲೂ ನಿರ್ದೇಶನಕ್ಕೆ ಹಳೆಯ ಹುಲಿಗಳನ್ನೇ ಹುಡುಕುವುದು ಸಾಮಾನ್ಯ. ಆದರೆ ರೂಪೇಶ್ ಶೆಟ್ಟಿ ತಮ್ಮ ಪ್ರಥಮ ಚಿತ್ರದಲ್ಲೇ  ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಸಾಮಾನ್ಯವಾಗಿ ತುಳು ಚಿತ್ರಗಳೆಂದರೆ ನಾಟಕೀಯವಾದ ಹಾಸ್ಯಗಳು, ಒಂದಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳು ಎಂದು ಸ್ಥಳೀಯರೇ ಮೂಗು ಮುರಿಯುವಂಥ ಸಮಯದಲ್ಲಿ ಆಕರ್ಷಕ ಸಂಭಾಷಣೆ, ಹೊಸ ಮಾದರಿಯ ತಮಾಷೆಗಳ ಮೂಲಕ ಪ್ರಥಮ ದಿನದಿಂದಲೇ ಭರ್ಜರಿ ಪ್ರದರ್ಶನ ಕಂಡಂಥ ಚಿತ್ರ ಗಿರಿಗಿಟ್. ಪ್ರಥಮ ಬಾರಿಗೆ ಮಂಗಳೂರು, ಉಡುಪಿ ಮಾತ್ರವಲ್ಲದೆ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿಯೂ ಯಶಸ್ವಿ ಪ್ರದರ್ಶನ ಕಾಣತೊಡಗಿದ ಚಿತ್ರ. ಆದರೆ ಚಿತ್ರದ ದೃಶ್ಯವೊಂದರಲ್ಲಿ ವಕೀಲರ ಅವಹೇಳನ ಆಗಿದೆ ಎನ್ನುವ ಕಾರಣಕ್ಕೆ ಪ್ರಕರಣ ದಾಖಲಾಗಿ ನ್ಯಾಯಾಲಯವು ಪ್ರದರ್ಶನಕ್ಕೆ ಪ್ರದರ್ಶನಕ್ಕೆ ತಡೆಯಾಜ್ಞೆಯನ್ನೂ ನೀಡಿತ್ತು. ಆದರೆ ಈಗ ಆ ದೃಶ್ಯಕ್ಕೆ ಕತ್ತರಿ ಹಾಕಿ ಮತ್ತೆ ಯಶಸ್ವಿ ಪ್ರದರ್ಶನ ಮುಂದುವರಿದೆ.

Girgit 1.jpg
Rockstar-Roopesh-Girigit-1.jpg

ಬಿಡುಗಡೆಯಂದೇ ನೂರು ಪ್ರದರ್ಶನ ಕಂಡಿರುವ ಮೊದಲ ಮತ್ತು ಸದ್ಯದ ಮಟ್ಟಿಗೆ ಏಕೈಕ ತುಳು ಚಿತ್ರ ಗಿರಿಗಿಟ್. ಮೊದಲ ವಾರದಲ್ಲೇ ಕಲೆಕ್ಷನ್ ಕೋಟಿ ದಾಟಿದಂಥ ಮೊದಲ ಚಿತ್ರ. ಕಾರ್ಕಳದಲ್ಲಿ 25ನೇ ವಾರ ಪೂರ್ತಿ ಮಾಡಿರುವುದು, ದುಬೈನಲ್ಲಿ ಏಳು ವಾರ ಪ್ರದರ್ಶನ ಕಂಡಿರುವುದು, ಇಸ್ರೇಲ್ ನಲ್ಲಿ ಎರಡು ಶೋ ಪಡೆದುಕೊಂಡಿರುವುದು, ಒಟ್ಟು ಓವರ ಸೀಸ್ ನಲ್ಲಿ ಹೆಚ್ಚು ಪ್ರದರ್ಶನ ಕಂಡಿರುವುದು.. ಹೀಗೆ ಪ್ರತಿಯೊಂದು ವಿಚಾರದಲ್ಲಿಯೂ ಗಿರಿಗಿಟ್ ತನ್ನದೇ ದಾಖಲೆ ಮೂಡಿಸಿಕೊಂಡಿದೆ. ತುಳುವಿನಿಂದ ಹೊರಗೆ ಲೆಕ್ಕಾಚಾರ ಮಾಡಿದಾಗ ಕೂಡ, ಬುಕ್ ಮೈ ಶೋನಲ್ಲಿ 94% ಪಡೆದುಕೊಂಡ ವರ್ಷದ ಪ್ರಥಮ ಚಿತ್ರವಾಗಿ ಗಿರಿಗಿಟ್ ಸ್ಥಾನ ಪಡೆದುಕೊಂಡಿದೆ. ಗೋವಾ, ಅಮೆರಿಕಾದಲ್ಲಿ ಬಿಡುಗಡೆಯಾದ ಪ್ರಥಮ ತುಳು ಚಿತ್ರ ಇದು ಆಗಿದ್ದು, ನೈಜೀರಿಯಾದಲ್ಲಿ ಪ್ರದರ್ಶನ ಏರ್ಪಡಿಸುವ ಯೋಜನೆ ಹಾಕಲಾಗಿದೆ ನಾಯಕ ಹಾಗೂ ನಿರ್ದೇಶಕರಾಗಿರುವ ರೂಪೇಶ್ ಶೆಟ್ಟಿ ಪಾಸಿಟಿವ್ ಪಿಕ್ಚರ್ ಗೆ ಮಾಹಿತಿ ನೀಡಿದ್ದಾರೆ.

ಚಿತ್ರದ ನಾಯಕಿಯಾಗಿ ಕಿರುತೆರೆಯ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಅಭಿನಯಿಸಿದ್ದು, ಕನ್ನಡ ಚಿತ್ರಗಳ ಮೂಲಕವೂ ಗುರುತಿಸಲ್ಪಡುತ್ತಿರುವ ಕುಸೆಲ್ದರಸೆ ಬಿರುದಾಂಕಿತ ನವೀನ್ ಡಿ ಪಡೀಲ್, ಅರವಿಂದ ಬೋಳಾರ್ ಮೊದಲಾದ ಖ್ಯಾತನಾಮ ತಾರೆಯರು ಚಿತ್ರದಲ್ಲಿದ್ದಾರೆ.

Rate UsDon’t love itNot greatGoodGreatLove itRate Us
bottom of page